ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳ ಸಭೆ .ಮದ್ದೂರು ತಾಲೂಕಿನಲ್ಲಿ ಹಾದುಹೋಗಿರುವ ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಾವೇರಿ ನೀರಾವರಿ ನಿಗಮ ಅಧೀನದಲ್ಲಿ ಅಗತ್ಯ ಕ್ರಮಗಳು ಮತ್ತು ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಮಾಜಿ ಸಂಸದರು ಹಾಗೂ ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್

ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳ ಸಭೆ .ಮದ್ದೂರು ತಾಲೂಕಿನಲ್ಲಿ ಹಾದುಹೋಗಿರುವ ಶಿಂಷಾ ನದಿ ಪಾತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಾವೇರಿ ನೀರಾವರಿ ನಿಗಮ ಅಧೀನದಲ್ಲಿ ಅಗತ್ಯ ಕ್ರಮಗಳು ಮತ್ತು ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಮಾಜಿ ಸಂಸದರು ಹಾಗೂ ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರ ನೇತೃತ್ವದಲ್ಲಿ, ನೆರೆಯ ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ಸೇರಿದಂತೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಿತು.ತಾಲೂಕಿನ ಕದಲೂರು ಗ್ರಾಮದ ನನ್ನ ನಿವಾಸದಲ್ಲಿ ನಡೆದ ಸಭೆಯಲ್ಲಿ ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ನೀರಾವರಿ ಇಲಾಖೆಯ ಉನ್ನತಾಧಿಕಾರಿಗಳು ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿ ಅಗತ್ಯ ಮಾಹಿತಿ ವಿನಿಮಯ ಮಾಡಿಕೊಂಡರು.ಮದ್ದೂರು ತಾಲೂಕಿನ ಕಸಬಾ ಹೋಬಳಿಯ ಆರು ಏತನೀರಾವರಿ ಯೋಜನೆಗಳು ಹಾಗೂ ಇಗ್ಗಲೂರು ಬ್ಯಾರೇಜ್ ಇನ್ನೀರು ವ್ಯಾಪ್ತಿಯ 19 ಕೆರೆಗಳಿಗೆ ಬನ್ನಹಳ್ಳಿ ಏತನೀರಾವರಿ ಮೂಲಕ ನೀರು ತುಂಬಿಸುವ ಹೆಚ್ಚುವರಿ ಕಾಮಗಾರಿಗಳ ಕುರಿತು ನೀರಾವರಿ ನಿಗಮದ ಅಧಿಕಾರಿಗಳು ವಿವರ ಮಂಡಿಸಿದರು. ಇದರ ಜೊತೆಗೆ ಕಸಬಾ ಹೋಬಳಿ ವ್ಯಾಪ್ತಿಯ ಶಿಂಷಾ ನದಿ ಎಡದಂಡದ ವಿವಿಧ ಕೆರೆಗಳ ಪುನಶ್ಚೇತನ, ನದಿ ಜಲಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಹೆಚ್ಚುವರಿ ಯೋಜನೆಗಳು ಹಾಗೂ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.ಇಗ್ಗಲೂರು ಬ್ಯಾರೇಜ್ನಿಂದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕಣ್ವ ಮತ್ತು ಗರಕಹಳ್ಳಿ ಏತ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಸಹ ಅಧಿಕಾರಿಗಳು ಮಾಹಿತಿ ನೀಡಿದರು. ಶಿಂಷಾ ನದಿ ಎಡ ಪಾರ್ಶ್ವದ ಆತಗೂರು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ನೂರಾರು ಹಳ್ಳಿಗಳು ಮಳೆಯಾಶ್ರಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ, ಈ ಭಾಗದ ರೈತರ ಕೃಷಿ ಜಮೀನುಗಳಿಗೆ ನೀರೊದಗಿಸುವ ಕೊಳವೆಬಾವಿಗಳ ಹಿತದೃಷ್ಟಿಯಿಂದ ಅಂತರ್ಜಲ ವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವನ್ನು ಒತ್ತಿಹೇಳಲಾಯಿತು.ಕಣ್ವ ಏತ ನೀರಾವರಿ ಯೋಜನೆಯಡಿ ಮದ್ದೂರು ತಾಲೂಕಿನ ಗಡಿಭಾಗದ ಮಾದನಾಯಕನಹಳ್ಳಿ, ಅರೆತಿಪ್ಪೂರು, ಕೂಳಗೆರೆ ಸೇರಿದಂತೆ ಐದು ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಿ, ಬನ್ನಹಳ್ಳಿ ಏತ ನೀರಾವರಿ ಸಂಪರ್ಕದಲ್ಲಿ ಕೈಬಿಟ್ಟಿರುವ ಕೆರೆಗಳಿಗೆ ಕಾರ್ಯಯೋಜನೆ ಸಿದ್ಧಪಡಿಸಲು ನಿರ್ಧರಿಸಲಾಯಿತು.ಸಿ.ಎ. ಕೆರೆ ವ್ಯಾಪ್ತಿಯ ಏತ ನೀರಾವರಿ ಕಾಮಗಾರಿಗಳ ರೂಪುರೇಷೆಗಳನ್ನು ಸಿದ್ಧಪಡಿಸಿ, ನಿಗದಿತ ಅವಧಿಯೊಳಗೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡುವಂತೆ ಹಾಗೂ ಗುಣಮಟ್ಟದ ಕಾಮಗಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.ಈ ಸಭೆಯಲ್ಲಿ ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ಕುಣಿಗಲ್ ಶಾಸಕ ಡಾ. ರಂಗನಾಥ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ಅಭಿಯಂತರ ರಘುರಾಮನ್, ಮುಖ್ಯ ಅಭಿಯಂತರ ಮಹೇಶ್, ಎ.ಇ.ಇ ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.

