ಒಳಮೀಸಲಾತಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಷೆಡ್ಯೂಲ್ ೯ ಕ್ಕೆ ಸೇರ್ಪಡಿಸಲು ಸಿಪಿಐ(ಎಂ) ಒತ್ತಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ-ಎನ್.ಡಿ.ಎ ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು

ಒಳಮೀಸಲಾತಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಷೆಡ್ಯೂಲ್ ೯ ಕ್ಕೆ ಸೇರ್ಪಡಿಸಲು ಸಿಪಿಐ(ಎಂ) ಒತ್ತಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ-ಎನ್.ಡಿ.ಎ ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು. ಇದನ್ನು ಸಂವಿಧಾನದ ಶೆಡ್ಯೂಲ್ ೯ ರಲ್ಲಿ ಸೇರಿಸಿ ಕೇಂದ್ರದಲ್ಲಿ ಇರುವಂತೆ ಶೇ.೧೭ ಮತ್ತು ಶೇ ೭ ರ ಜಾರಿಗೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯದ ಸಂಸದರು ವಿಶೇಷ ಒತ್ತಡದ ಪ್ರಯತ್ನಗಳನ್ನು ನಡೆಸಬೇಕು. ಷೆಡ್ಯೂಲ್ ೯ ಕ್ಕೆ ಸೇರ್ಪಡೆ ಮಾಡದಿರುವುದು ಇಂದಿನ ಒಟ್ಟು ಸಮಸ್ಯೆಯ ಒಂದು ಪ್ರಧಾನ ಅಂಶವಾಗಿದ್ದು ಈ ಸಮಸ್ಯೆಯ ಇತ್ಯಾರ್ಥಕ್ಕೆ ಕೇಂದ್ರದ ಮೇಲೆ ರಾಜ್ಯದ ಸಂಸದರುಗಳು ಒತ್ತಡ ತರಲು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಸಿಪಿಐ(ಎಂ) ಆಗ್ರಹಿಸಿದೆ. ಒಳ ಮೀಸಲಾತಿ ಜಾರಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಲು ಸಂಸದರುಗಳು ಧ್ವನಿ ಎತ್ತಬೇಕು ಎಂದು ಆಗ್ರಹಿಸಿ ಏಪ್ರಿಲ್ ೧೩ ರಂದು ರಾಜ್ಯದ ಎಲ್ಲಾ ಸಂಸದರ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರ ಭಾಗವಾಗಿ ಸೋಮವಾರ ಕೇಂದ್ರ ಸಚಿವ ವಿ. ಸೋಮಣ್ಣನವರ ಕಛೇರಿ ಎದುರು ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಸಿಪಿಐಎಂ ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇಂದಿನ ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನ ಅರ್ಥ ಮಾಡಿಕೊಂಡು ಭಾರತದ ಒಕ್ಕೂಟದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಗುಂಪಿಗೆ ವರ್ಗಾಯಿಸಬಾರದು. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸುಮಾರು ೩ ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಲು ಒತ್ತಾಯಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಮತ್ತು ಸಂಸ್ಥೆಗಳಲ್ಲಿ ಖಾಯಂ ನೇಮಕಾತಿಯೇ ಸ್ಥಗಿತಗೊಂಡAತಾಗಿದೆ ಅಥವಾ ಇಲ್ಲದಂತಾಗಿದೆ. ಇದರಿಂದ ವಾಸ್ತವವಾಗಿ ಮೀಸಲಾತಿಯೇ ಇಲ್ಲದಂತಾಗಿದೆ. ಆದ್ದರಿಂದ ಎಲ್ಲಾ ಸಾರ್ವಜನಿಕ ರಂಗಗಳಲ್ಲೂ ಖಾಯಂ ಉದ್ಯೋಗಗಳನ್ನು ತುಂಬಬೇಕು ಮತ್ತು ಮೀಸಲಾತಿಯನ್ನು ರಕ್ಷಿಸಬೇಕು. ಉದಾರೀಕರಣ ಮತ್ತು ಖಾಸಗೀಕರಣದಿಂದ ಪ್ರಧಾನವಾಗಿ ಉದ್ಯೋಗಗಳ ಸೃಷ್ಟಿಯು ಖಾಸಗಿ ರಂಗದಲ್ಲೇ ಹೆಚ್ಚಾಗಿ ಇರುವುದು. ಆದರೆ ಇಲ್ಲಿ ಮೀಸಲಾತಿ ನೀತಿಯೇ ಇಲ್ಲವಾಗಿದೆ. ಆದ್ದರಿಂದ ಖಾಸಗೀ ರಂಗದಲ್ಲಿಯೂ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಮೀಸಲಾತಿ ನೀತಿಯು ಅತ್ಯಂತ ಸೀಮಿತಗೊಂಡ ಅವಕಾಶವಾಗಿ ಬಿಡುತ್ತದೆ. ಭವಿಷ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಬದಲಾಗುತ್ತಿರುವ ಸನ್ನಿವೇಶದಲ್ಲಿ ಖಾಸಗಿ ರಂಗದಲ್ಲಿ ನಮ್ಮ ಭಾರತದ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯದ ಸಾಧನೆಯಲ್ಲಿ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಜಾರಿಗೊಳಿಸಲು ಎಲ್ಲಾ ಒತ್ತಡ ಹಾಕಬೇಕಾಗಿ ಆಗ್ರಹಿಸುತ್ತೇವೆ. ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.೫೦ ದಾಟಬಾರದು ಎನ್ನುವುದಕ್ಕೆ ಇಂದ್ರಾ ಸಹಾನಿ ಕೇಸನ್ನು ಉದಾಹರಿಸಿ ಮಾತನಾಡಲಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ನೀಡಬೇಕು ಎನ್ನುವ ನೀತಿಗೆ ಅಡ್ಡಿಯಾಗುತ್ತಿದೆ. ಇದೇ ಇಂದ್ರಾ ಸಹಾನಿ ಕೇಸಿನ ತೀರ್ಪಿನಲ್ಲಿಯೇ ವಿಶೇಷ ಸಂದರ್ಭಗಳಲ್ಲಿ ಈ ಮಿತಿಯನ್ನು ದಾಟಲು ಅವಕಾಶ ಇರುವುದನ್ನು ಗಮನಿಸಬೇಕು. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳಿಗೆ ಇWS ಕೋಟಾದಲ್ಲಿ ಶೇ.೧೦ ಮೀಸಲಾತಿಯನ್ನು ಒದಗಿಸಿ ಕೇಂದ್ರ ಸರ್ಕಾರವೇ ಒದಗಿಸಿರುವ ಉದಾಹರಣೆ ಇದೆ. ಅದೂ ಕೇವಲ ೪೮ ಗಂಟೆಗಳಲ್ಲಿಯೇ ಜಾರಿಗೆ ಬರುವಂತೆ ನೋಡಿಕೊಳ್ಳಲಾಗಿದೆ. ಶೇ.೫೦ ರ ಮಿತಿಯನ್ನು ದಾಟಿದ ಹಲವು ರಾಜ್ಯಗಳೂ ಇಂತಹ ಅವಕಾಶ ಪಡೆದುಕೊಂಡಿವೆ. ಕರ್ನಾಟಕ ರಾಜ್ಯ ಸರ್ಕಾರವು ತನ್ನ ಕೋರಿಕೆಯನ್ನು ೨೦೨೨ ರಲ್ಲಿಯೇ ಮಂಡಿಸಿದೆ. ಆದ್ದರಿಂದ ರಾಜ್ಯದ ಕೋರಿಕೆಗೆ ಭಾರತ ಸರ್ಕಾರ ಕೂಡಲೇ ಅಂಗೀಕಾರ ನೀಡಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವಂತೆ, ಅದು ಜಾರಿಯಾಗುವಂತೆ ಸಹ ತಾವೂ ಕ್ರಮ ವಹಿಸಬೇಕು. ಈ ಸಮುದಾಯಗಳ ಪ್ರಗತಿಗೆ ಕೇಂದ್ರದ ಒಟ್ಟು ಬಜೆಟ್ ನಲ್ಲಿ ಹಾಗೂ ಅಭಿವೃದ್ದಿಗೆ ಸಹಾಯಕವಾಗಿರುವ ಉಪಯೋಜನೆಗಳಿಗೆ ಬಜೆಟ್ ನಲ್ಲಿ ಭಾರತ ಸರ್ಕಾರ ನೀಡುತ್ತಿರುವ ಮೊತ್ತ ಕಡಿಮೆಯಾಗುತ್ತಿದೆ. ಮಾತ್ರವಲ್ಲ, ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಹಣ ಮೀಸಲಿಡಬೇಕು ಎನ್ನುವ ಹಿಂದಿನ ಯೋಜನಾ ಆಯೋಗದ ನಿರ್ದೇಶನ ಇಲ್ಲವಾಗಿದೆ. ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಹಣ ಮೀಸಲಿಡುವುದು ಈ ಸಮುದಾಯಗಳ ಪ್ರಗತಿಗೆ ಅತ್ಯಂತ ಅಗತ್ಯವಾದುದು. ಈ ಮೊತ್ತವನ್ನು ಬೇರೆ ಕಾರ್ಯಕ್ರಮಗಳಿಗೆ ವರ್ಗಾಯಿಸಕೂಡದು. ಈ ದಿಸೆಯಲ್ಲಿ ಜನಸಂಖ್ಯೆ ಅನುಗಣವಾಗಿ ಉಪ ಯೋಜನೆಗಳಿಗೆ ಹಣ ಹಂಚಿಕೆ ಮಾಡುವಂತೆ ಕ್ರಮ ವಹಿಸಬೇಕು. ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಉಪ ಯೋಜನೆಗಳಿಗಾಗಿ ಭಾರತ ಸರ್ಕಾರ ಕಾಯ್ದೆಯೊಂದನ್ನು ರೂಪಿಸಬೇಕು. ನೇಮಕಾತಿ ಪ್ರಕ್ರಿಯೆಯ ರೋಸ್ಟರ್ ನಿಯಮದಲ್ಲಿ ಎಡ, ಬಲ, ಸ್ಪೃಶ್ಯ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ಖಾತ್ರಿಗೊಳಿಸುವಂತೆ ತಾವು ಕ್ರಿಯಾಶೀಲ ಪಾತ್ರವಹಿಸಬೇಕು. ಕರ್ನಾಟಕ ಸರ್ಕಾರವು ಅಲೆಮಾರಿ, ಆದಿವಾಸಿ ಮತ್ತು ಅಂಚಿನ ಜಾತಿಗಳಿಗೆ ಒಳ-ಮೀಸಲಾತಿ ಪ್ರವರ್ಗವನ್ನು ರೂಪಿಸಲು ರಾಜ್ಯ ಸರ್ಕಾರದೊಂದಿಗೆ ತಾವು ಮುತುವರ್ಜಿ ವಹಿಸಬೇಕು. ಸಂವಿಧಾನದ ಶೆಡ್ಯೂಲ್ ೯ ಕ್ಕೆ ಸೇರ್ಪಡೆ ಮಾಡುವಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸುತ್ತಲೇ, ಕರ್ನಾಟಕ ಸರ್ಕಾರವು ಪ.ಜಾತಿ, ಪಂಗಡಗಳಿಗೆ ಇರುವ ಹಿಂದಿನ ಶೇ.೧೫ ಮೀಸಲಾತಿ ಪ್ರಮಾಣದೊಳಗೆ ಒಳ-ಮೀಸಲಾತಿಯನ್ನು ಜಾರಿಗೊಳಿಸಿ, ೫೬,೪೩೨ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆ ನಿಲ್ಲಬಾರದು, ವಿಳಂಬ ಆಗಬಾರದು. ಒಳ ಮೀಸಲಾತಿ ನೀತಿ ಅಳವಡಿಸಬೇಕು ಎಂಬುದನ್ನು ತಾವು ಒತ್ತಾಯಿಸಬೇಕು. ಉದ್ಯೋಗ ನೇಮಕಾತಿ ಮಾಡುವಾಗ ಒಳ ಮೀಸಲಾತಿಯ ಎಲ್ಲಾ ಪ್ರವರ್ಗಗಳಿಗೂ ನ್ಯಾಯಸಮ್ಮತವಾದ ರೀತಿಯಲ್ಲಿ ರೋಸ್ಟರ್ ಬಿಂದು ಅಳವಡಿಸಬೇಕು.ಇದಕ್ಕಾಗಿ ಕಾನೂನು ತಜ್ಞರು, ಚಳುವಳಿ ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡು ಸಮಾಲೋಚನಾ ಸಭೆಗಳನ್ನು ನಡೆಸಿ ತೀರ್ಮಾನ ಮಾಡಬೇಕು. ತಾವು ಪರಿಸ್ಥಿತಿಯ ಗಂಭೀರತೆ ಹಾಗೂ ಸೂಕ್ಷö್ಮತೆಗಳನ್ನು ಗಮನದಲ್ಲಿರಿಸಿ ಭಾರತದ ಒಕ್ಕೂಟ ಸರ್ಕಾರ ತುರ್ತು ಕ್ರಮ ವಹಿಸುವಂತೆ ಸೂಕ್ತ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದೆ ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ. ಉಮೇಶ್, ಕಮಲ, ಎಸ್.ಡಿ.ಪಾರ್ವತಮ್ಮ ದಲಿತ ಹಕ್ಕುಗಳ ಸಮಿತಿಯ ರಾಜು ವೆಂಕಟಪ್ಪ, ಕಲ್ಪನ, ಖಲೀಲ್, ಶಂಕರಪ್ಪ, ರಂಗಧಾAಯ್ಯ, ರಾಘವೇಂದ್ರ ಎಸ್, ಸಂತೋಷ್, ಗೋವಿಂದರಾಜು, ಹನುಮೇಶ್, ಅಶ್ವತ್ಥಪ್ಪ, ಕೃಷ್ಣಪ್ಪ, ಇನ್ನು ಮುಂತಾದವರು ಉಪಸ್ಥಿತರಿದ್ದರು


