ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 112 ಎಮೆರ್ಜೆನ್ಸಿ ರೆಸ್ಪಾನ್ಸ್ (ERSS) ಬಹುಭಾಷೆಗಳಲ್ಲಿ ಸ್ಪಂದಿಸುವ ತಂತ್ರಜ್ಞಾನವನ್ನು ಬೆಂಗಳೂರು ನಗರ ಪೊಲೀಸರು ಅಳವಡಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಚಾಲನೆ ನೀಡಿದೆ

ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 112 ಎಮೆರ್ಜೆನ್ಸಿ ರೆಸ್ಪಾನ್ಸ್ (ERSS) ಬಹುಭಾಷೆಗಳಲ್ಲಿ ಸ್ಪಂದಿಸುವ ತಂತ್ರಜ್ಞಾನವನ್ನು ಬೆಂಗಳೂರು ನಗರ ಪೊಲೀಸರು ಅಳವಡಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಚಾಲನೆ ನೀಡಿದೆ.ಯಾರಾದರೂ 112 ಗೆ ಕರೆ ಮಾಡಿದಾಗ, ಭಾಷಾ ಸಮಸ್ಯೆ ಇದ್ದಲ್ಲಿ, ಕರೆ ಸ್ವಯಂಚಾಲಿತವಾಗಿ ಕರೆ ಮಾಡುವವರಿಗೆ ಅನುಕೂಲಕರವಾದ ಭಾಷೆಗೆ ಅನುವಾದಗೊಳ್ಳುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹತ್ತು ಭಾಷೆಗಳನ್ನು ಸಕ್ರಿಯಗೊಳಿಸಲಾಗಿದೆ.112 ಎಮೆರ್ಜೆನ್ಸಿ ರೆಸ್ಪಾನ್ಸ್ ಆಯಾ ರಾಜ್ಯಗಳ ಭಾಷೆಗಳಿಗೆ ಸೀಮಿತವಾಗಿ ಸೇವೆ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು, ಕನ್ನಡ ಭಾಷೆ ಸೇರಿದಂತೆ ವಿವಿಧ ರಾಜ್ಯಗಳ 7 ಭಾಷೆಗಳಿಗೆ ಮತ್ತು ಹೊರದೇಶಗಳ 3 ಭಾಷೆಗಳಿಗೆ ಸ್ಪಂದಿಸಲಿದೆ. 112ಗೆ ಕರೆ ಮಾಡುವ ನಾಗರಿಕರು, ಅವರು ಮಾತನಾಡುವ ಅನುಕೂಲಕರ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಯಾವುದೇ ರೀತಿಯ ತುರ್ತು ಕರೆಗಳಿಗೆ ತರ್ಜುಮೆ ಮಾಡಿ ನೆರವು ನೀಡಲಾಗುತ್ತದೆ.ದೇಶದ ಯಾವುದೇ ಮಹಾನಗರಗಳಲ್ಲಿಯೂ 112 ಎಮರ್ಜೆನ್ಸಿ ರೆಸ್ಪಾನ್ಸ್‌ಗೆ ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ. ಪ್ರಥಮ ಬಾರಿಗೆ ಬೆಂಗಳೂರು ನಗರ ಪೊಲೀಸರು ಬಹುಭಾಷೆಗಳಲ್ಲಿ ನೆರವು ನೀಡುವ ವ್ಯವಸ್ಥೆ ಮಾಡಿದ್ದಾರೆ.ಬೆಂಗಾಲಿ, ಗುಜುರಾತಿ, ಓಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ ಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಪಂಚದ ಎಲ್ಲ ಕಡೆಯ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಸಾಮಾನ್ಯವಾಗಿ ಹೊರದೇಶದಿಂದ ಬರುವವರು ಇಂಗ್ಲೀಷ್ ಭಾಷೆ ಹೊರತಾಗಿ ಬೇರೆ ಭಾಷೆಗಳಲ್ಲಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿದೇಶದಿಂದ, ಯಾವ ಭಾಷೆ ಹೆಚ್ಚು ಮಾತಾಡುವ ಜನರು ಬರುತ್ತಾರೆ ಎಂಬ ಬಗ್ಗೆ ಡೇಟಾ ಸಂಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಸ್ಪ್ಯಾನೀಶ್, ಫ್ರೆಂಚ್, ಅರೇಬಿಕ್ ಭಾಷೆ ಮಾತಾಡುವ ವಿದೇಶಿಗರು ಹೆಚ್ಚಾಗಿ ಬೆಂಗಳೂರಿಗೆ ಬರುತ್ತಾರೆ ಎಂಬುದು ಕಂಡು ಬಂದಿದೆ. ವಿದೇಶಿಗರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಬಹುಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 112 ERSS ಬಹುಭಾಷೆಗಳಲ್ಲಿ ಸ್ಪಂದಿಸುವ ವ್ಯವಸ್ಥೆ ಬಹಳ ಉಪಯುಕ್ತವಾಗಲಿದೆ. ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ ಹಾಗೂ ಎಲ್ಲ ವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

